17/09/2021
ಸಮಸ್ತ ವಿಶ್ವಕರ್ಮ ಬಾಂಧವರಿಗೆ, ಶ್ರೀ ವಿಶ್ವಕರ್ಮ ಮಹೋತ್ಸವದ ಶುಭಾಶಯಗಳು!
ಈ ಶುಭ ಸಂದರ್ಭದಲ್ಲಿ ನನ್ನ ಅನುಭವ ಮತ್ತು ವಿಚಾರವನ್ನು ತಮ್ಮಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿರುವ ಶ್ರೀ ಗಾಯಿತ್ರಿ ಲೋಹ ಶಿಲ್ಪ ಕಲಾಕೇಂದ್ರ ಸಂಸ್ಥೆಗೆ ನನ್ನ ಪರಿವಾರದೊಂದಿಗೆ ಬಿಟ್ಟಿ ಕೊಟ್ಟಿದ್ದೆ. ಈ ಸಂಸ್ಥೆಯ ಮುಖ್ಯಸ್ಥ ಶ್ರೀ ಮೌನೇಶ್ ಬಂಡಿ ಇವರು ಉತ್ಕೃಷ್ಟ ಶ್ರೇಷ್ಠ ಮತ್ತು ಅನುಭವಿ ಲೋಹ ಶಿಲ್ಪ ಕಲಾಕಾರರಾಗಿದ್ದಾರೆ. ಇವರ ಹಸ್ತದಿಂದ ನಮ್ಮ ಮನೆಯಲ್ಲಿ ಪೂಜಿಸಲು ಶ್ರೀ ಕಾಳಿಕಾ ಮಾತೆಯ ವಿಗ್ರಹವನ್ನು ಮಾಡಿಸಿದ್ದು, ಇವರು ತಯಾರಿಸಿದ ಪಂಚಲೋಹ ಮತ್ತು ಬೆಳ್ಳಿ ಅನೇಕ ದೇವತಾ ವಿಗ್ರಹಗಳನ್ನು ನೋಡಿದೆ. ಅಪ್ರತಿಮ ಕಲಾಕಾರ. ಇವರ ಜೊತೆ ಶಿಲ್ಪಕಲೆ ಮತ್ತು ಅದರ ಉದ್ಯೋಗದ ಬಗ್ಗೆ ಅನೇಕ ವಿಚಾರಗಳನ್ನು ಅವರೊಂದಿಗೆ ಚರ್ಚಿಸಿದೆ. ಅವರ ಆರ್ಥಿಕ ಪರಿಸ್ಥಿತಿ ಮತ್ತು ಜೀವನ ಮಟ್ಟವನ್ನು ನೋಡಿ ತುಂಬಾ ಖಸಿಬಿಸಿ ಆಯಿತು. ಇವರ ಮನೆಯು ಅತ್ಯಂತ ದುಸ್ಥಿತಿಯಲ್ಲಿತದ್ದು, ಮಲಗಲು ಮತ್ತು ಕೆಲಸ ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ಜೀವನ ನಡೆಸಲು ಬೇಕಾಗುವ ಕನಿಷ್ಠ ಸೌಲಭ್ಯಗಳು ಕೂಡ ಇಲ್ಲ. ಇದು ಒಬ್ಬ ಶ್ರೀ ಮೌನೇಶ್ ಬಂಡೆಯ ಕಥೆಯಲ್ಲ. ಇಂತಹ ಅನೇಕ ಸುವರ್ಣಕಾರರು, ಬಡಿಗ, ಶಿಲ್ಪ ಕಲಾಕಾರರು, ಕರಕುಶಲಕರ್ಮಿಗಳು ನಮ್ಮ ವಿಶ್ವಕರ್ಮ ಸಮಾಜದಲ್ಲಿ ಬಡತನದಿಂದ ಜೀವಿಸುತ್ತಿದ್ದಾರೆ. ಇವರು ತಮ್ಮ ಕಲೆಯಿಂದ ತಮ್ಮ ಆರ್ಥಿಕ ಬೆಳವಣಿಗೆಯನ್ನು ಕಾಣಲು ಸಾಧ್ಯವೇ ಇಲ್ಲ. ಏಕೆಂದರೆ ಕಲೆಯು ವ್ಯಾಪಾರಕ್ಕೆ ಇಡುವ ವಸ್ತುವಲ್ಲ. ಕಲೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಇವರಿಗೆ ಪೋಷಕರ ಅವಶ್ಯಕತೆ ಇದೆ. ನಮ್ಮ ಪೂರ್ವ ಇತಿಹಾಸವನ್ನು ಕೆಣಕಿದಾಗ ಕೂಡಾ, ಕಲಾವಿದರನ್ನು ರಾಜಮಹಾರಾಜರು ಪೋಷಿಸಿದ್ದುಂಟು,
ಆದ್ದರಿಂದಲೇ ನಮ್ಮ ಭಾರತದಲ್ಲಿ ಅನೇಕ ಶಿಲ್ಪಕಲೆಗಳನ್ನು ನೋಡಬಹುದಾಗಿದೆ.
ವಿಶ್ವಕರ್ಮ ಸಮಾಜದ ನಾವು ಉತ್ಕೃಷ್ಟ ಬ್ರಾಹ್ಮಣರು, ಸರ್ವ ಶ್ರೇಷ್ಠರು, ಸೃಷ್ಟಿಕರ್ತರು, ಸುಸಂಸ್ಕೃತರು ಮತ್ತು ಎಲ್ಲಾ ಸಮಾಜ ಬಾಂಧವರಿಗೆ ಅವಶ್ಯಕವಿರುವ ವ್ಯಕ್ತಿ ಮಹತ್ವ ಎಂದೆಲ್ಲಾ ಹೇಳಿಕೊಳ್ಳುವ ನಾವು ನಿಜವಾಗಿಯೂ ಇದಕ್ಕೆ ಯೋಗ್ಯರೆ? ನಾವು ಅಂತಹ ಉನ್ನತ ಜೀವನ ಸಾಗಿಸುತ್ತಿದ್ದೇವೆಯೇ? ನಿಜವಾಗಿಯೂ ನಾವು ಸಮಾಜದಲ್ಲಿ ಗೌರವದಿಂದ ಜೀವಿಸುತ್ತಿದ್ದೇವೆ? ಜನರು ನಮ್ಮನ್ನು ಗೌರವಿಸುತ್ತಿದ್ದಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಸಮಾಜದ ಗುರುಹಿರಿಯರು, ಮಠಾಧಿಪತಿಗಳು, ಉದ್ಯೋಗಪತಿಗಳು, ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸುವ ನಮ್ಮ ಸಮಾಜದ ಕಾರ್ಯಕರ್ತರು ಒಂದಾಗಿ ಉತ್ತರವನ್ನು ಹುಡುಕುವ ಪ್ರಯತ್ನ ಮಾಡಬೇಕಾಗಿದೆ.
ಸಮಾಜದಲ್ಲಿ ಜಾತ್ರಾ ಮಹೋತ್ಸವಗಳನ್ನು, ಜಯಂತೋತ್ಸವಗಳನ್ನು ಉಜ್ರಂಭಣೆಯಿಂದ ಆಚರಿಸುವುದು, ಸಾವಿರಾರು ಜನ ಕೂಡುವುದು ಮತ್ತು ಪ್ರಸಾದದ ಹೆಸರಿನಲ್ಲಿ ಊಟೋಪಚಾರಕ್ಕೆ ಖರ್ಚು ಮಾಡುವುದು, ಇವೆಲ್ಲವುಗಳು ವ್ಯರ್ಥ. ಸಮಾಜದ ಏಳಿಗೆಯಲ್ಲಿ ಮತ್ತು ಅದರ ಆರ್ಥಿಕ ಪ್ರಗತಿಯಲ್ಲಿ ಇವುಗಳು ಯಾವ ಪಾತ್ರವನ್ನು ವಹಿಸುವುದಿಲ್ಲ. ನಿಜಸ್ವರೂಪದಲ್ಲಿ ಶ್ರೀ ವಿಶ್ವಕರ್ಮ ಪ್ರಭುವಿನ ಆರಾಧನೆಯನ್ನು ಮಾಡಬೇಕಾದರೆ ಅಥವಾ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಆಚರಿಸಬೇಕಾದರೆ ನಮ್ಮ ವಿಶ್ವಕರ್ಮ ಸಮಾಜದ ಪಂಚ ಕುಲಕಸುಬುಗಳನ್ನು ಹೊರತುಪಡಿಸಿ, ಇನ್ನಿತರ ಉದ್ಯೋಗ, ವ್ಯಾಪಾರ ಸರ್ಕಾರ ಮತ್ತು ಸರ್ಕಾರೇತರ ಕೆಲಸಗಳಲ್ಲಿ ತೊಡಗಿದ ಸಮಾಜದ ಬಾಂಧವರು ತಮ್ಮ ತಮ್ಮ ಕ್ಷೇತ್ರದಲ್ಲಿ ವಾಸಿಸುವ ಯೋಗ್ಯ ಮತ್ತು ಬಡ ಕರಕುಶಲ ಕಾರ್ಮಿಕರನ್ನು ಶಿಲ್ಪಿಗಳನ್ನು ಆಯ್ಕೆ ಮಾಡಿ, ತನು-ಮನ, ಧನದಿಂದ ಸಹಾಯ ಒದಗಿಸಿ, ಪೋಷಕರಾಗ ಬೇಕಾಗುತ್ತದೆ. ಅವರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಿ ಅವರಲ್ಲಿರುವ ಕಲೆಯನ್ನು ಪೋಷಿಸುವುದು ಮತ್ತು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಇಂತಹ ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು, ನಿಜ ಅರ್ಥದಲ್ಲಿ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಆಚರಿಸಬೇಕಾಗಿದೆ.
ಇದು ನನ್ನ ವೈಯಕ್ತಿಕ ಅಭಿಪ್ರಾಯ, ಕೆಲವರಿಗೆ ಇದು ಇಷ್ಟವಾಗದೇ ಇರಬಹುದು. ಅವರ ವಿಚಾರದಲ್ಲಿ ಇದು ತುಂಬಾ ವಿಚಿತ್ರವೆನಿಸಿದರೂ ಸಮಾಜದ ಒಳಿತಿಗಾಗಿ ಮತ್ತು ಅದರ ಅಭಿವೃದ್ಧಿಗಾಗಿ ಜಾತ್ರಾ ಮಹೋತ್ಸವಗಳು ಖರ್ಚುವೆಚ್ಚಗಳನ್ನು ಕಡಿಮೆ ಮಾಡಿ, ಸಾಂಕೇತಿಕವಾಗಿ ಅತಿ ಭಕ್ತಿಯಿಂದ ವಿಶ್ವಕರ್ಮ ಮಹೋತ್ಸವ ಆಚರಿಸಿ, ಪೂಜಿಸಿ, ಸರಳತೆಯಿಂದ ಆಚರಿಸಿ, ಕಲಾ ಪೋಷಕರಾಗುವುದೇ ನಿಜವಾದ ವಿಶ್ವಕರ್ಮ ಮಹೋತ್ಸವ.
ತಮ್ಮ ಚಿಂತಕ.
ಗಜಾನನ ಮ. ಸಾಬಣ್ಣವರ
ಚೇರಮನರು, ಹ್ಯಾಮರ್ಸನ್ಸ್ ಗೋಲ್ಡ್ ಆರ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿ.
ಬೆಳ್ಳಿ ಮತ್ತು ಬಂಗಾರದ ಆಭರಣಗಳ ತಯಾರಕರು ಮತ್ತು ತರಬೇತಿದಾರರು.